Posts

Showing posts from July, 2021

ಮುಂಗಾರು 15

 ಮುಂಗಾರು -15 ಸಕಾಲದಲ್ಲಿ  ಮಳೆಬರದಿದ್ದರೆ ಜೀವಲೋಕ ತಲ್ಲಣ ಗೊಳ್ಳುತ್ತದೆ . ಮುಂಗಾರು ಮುನಿದರೆ ಬರಗಾಲ ಬಾಗಿಲು ತಟ್ಟುತ್ತದೆ.  ಅಂತಹ ಒಂದು ಸಂಕಷ್ಟದ ಕಾಲದಲ್ಲಿ ಬರೆದ ಕವನ.  ಮೊರೆ  ಸುರಿಸಿ ಮೋಡಗಳೆ ವರ್ಷಧಾರೆಯನು  ಒಂದಿನಿತುಚಣ ಇಲ್ಲಿ ನಿಲ್ಲಿ  ಬಾಯಾರಿದ ಭುವಿಗೆ ತನಿಸ ಚೆಲ್ಲಿ  ಗ್ರೀಷ್ಮದಾಕಾಶದಲಿ ಉರಿವದಿನದೆಡೆಯಲ್ಲಿ   ಆಡುತಿದೆ ತುಂಡು ಮೋಡ  ಭ್ರಮೆಯಾಗಿ ನಿಂತಿದೆ ಹನಿಯಾಸೆ ಮನದಲ್ಲಿ  ಕಾಡುತಿದೆ ಮೇಘ ನೋಡ  ಬಾಯ್ತೆರೆದ ಭೂರಮೆಗೆ ನೋಟ ದೆಸೆ ದೆಸೆಯೆಡೆಗೆ  ಕಾತರದಿ ಕಾರ್ಗಾಲ ಬರವು  ಗಿಡ ಮರ ಹೂ ಬಳ್ಳಿ ಒಣಗೊಣಗಿ ನಿಂತಿಹುದು  ಎಲ್ಲಿಹುದು ಹಸಿರು ಚೆಲುವು?  ದಿಕ್ಕೆಟ್ಟು ಅಲೆಯುತಿವೆ ದನ ಕರುಗಳ ಹಿಂಡು  ತಲೆಕೆಳಗು ನರನ ಬಾಳು  ಹಕ್ಕಿ ಪಕ್ಕಿಗಳೆಲ್ಲ ಮೌನವಾಗಿಹವು  ಕಾಣಸಿಗದೇ ಎಲ್ಲೂ ವರ್ಷ ಬೆಡಗು   ಸಾಕು ಬಿಸಿಲು ಹಸಿವು ಬೇಗೆ ನೀರಡಿಕೆ  ಸಾಕಯ್ಯ ಈ ಅನಾವೃಷ್ಟಿ  ಶಿಕ್ಷೆ  ನೀಡು ಗುಡುಗು ಮಿಂಚ ಮಳೆಯ ಭಿಕ್ಷೆ  ಬೇಕಯ್ಯ ವರುಣ ನಿನ್ನ ರಕ್ಷೆ  ……..ರಾಜೀವ ಅಜ್ಜೀಬಳ