ನೀವು ಏನನ್ನೋ ಕಳೆದುಕೊಳ್ಳುತ್ತಿದ್ದೀರಿ
ಅನಿಸಿದ್ದನ್ನ ಬರೆಯದಿದ್ದರೆ
ಹೇಳಬೇಕನಿಸಿದ್ದನ್ನು ಹೇಳದೇ ಇದ್ದರೆ
ಆ ಒಂದು ಶಬ್ದ, ಒಂದು ಮಾತು
ಒಂದು ನೊಂದಜೀವಕ್ಕೆ ಸಾಂತ್ವನ
ನೀಡುವಂತಿದ್ದರೆ
ಸುಂದರ ಭಾವನೆಗಳ ಒಡನಾಡಿಗಳಜೊತೆ
ಹಂಚಿಕೊಳ್ಳದಿದ್ದರೆ
ಒಮ್ಮೊಮ್ಮೆ ಚಿಂತೆಗಳ ಸಂತೆಯಲಿ
ಕಳೆದು ಹೋಗದಿದ್ದರೆ
ಸಹಜ ಗಿಡ ಮರಗಳ ಜೊತೆ
ಒಂದಿಷ್ಟು ಕಾಲ ಮೌನವಾಗಿ ಸಂಭಾಷಿಸದಿದ್ದರೆ
ನೀವು ಏನನ್ನೋ ಕಳೆದುಕೊಳ್ಳುತ್ತಿದ್ದೀರಿ
ನಗುವ ಕ್ಷಣದಲ್ಲಿ ಮುಖ ಬಿಗಿದುಕೊಂಡರೆ
ಉಕ್ಕಿಬಂದ ಅಶ್ರುಬಿಂದುಗಳ ಅದುಮಿಟ್ಟುಕೊಂಡರೆ
ಸಿಟ್ಟಿನ ಕೈಗೆ ಬುದ್ಧಿಯಿತ್ತು ಸಹನೆಗೆ ನೀರು ಬಿಟ್ಟರೆ
ತಾನಾಗಿ ಬಂದ ಅವಕಾಶಗಳ ನೀವಾಗೇ ಕೈಬಿಟ್ಟರೆ
ನೀವು ಏನನ್ನೋ ಕಳೆದುಕೊಳ್ಳುತ್ತಿದ್ದೀರಿ
ಹೂನಗೆಮೊಗ ಸೊಬಗ ಆನಂದಿಸದಿದ್ದರೆ
ಸಂಗೀತ ಕೇಳುತ್ತ ಕೆಲಕಾಲ ಮೈಮರೆಯದಿದ್ದರೆ
ಪ್ರಕೃತಿಯ ಅನುಪಮ ಚೆಲುವಿಗೆ ಮೂಕಸ್ಮಿತನಾಗದಿರೆ
ಆಗೊಮ್ಮೆ ಈಗೊಮ್ಮೆ ನಿಮ್ಮೊಂದಿಗೆ ನೀವೇ
ಮಾತಾಡಿ ಆತ್ಮಅವಲೋಕನಗೈಯದಿದ್ದರೆ
ನೀವೇನೋ ಕಳೆದುಕೊಳ್ಳುತ್ತಿದ್ದೀರಿ
……….ರಾಜೀವ ಅಜ್ಜೀಬಳ
Comments
Post a Comment