ಸುಮ್ಮನೆ ಹೀಗೊಂದು ಕರೋನಾ ಕವನ
ಕರೋನಾ ದಂಡಯಾತ್ರೆ, ನಗು, ಅಳು ದುಗುಡ ದುಮ್ಮಾನ
ಕುದಿ ಬಂಡಿಯಿಂದ ಅಷ್ಟೇ ತೆಗೆದ ತಾಜಾ ಉದ್ದಿನ ಬೋಂಡಾ ಅದೇ ಆ ಮೊಗ
ನಕ್ಕರೆ, ಕಣ್ಣೆದುರಲಿ ಸೂರ್ಯಕಾಂತಿ
ಸಂಜೆಗಾದ್ರೆ ಚಂದ್ರಕಾಂತಿ -ಚವತಿ ಚಂದ್ರ
ದಂತಸಾಲು ಆಹಾ, ಸುಲಿದ ಕುಂಡಿಗೆ ಜೋಳ, ದಾಳಿಂಬೆ ಬೀಜ, ಕಾಡು ಮಲ್ಲಿಗೆ
ಛೇ, ಬೇಡ ಬಿಡಿ ಬಳಸಿ,ಸವೆದು ಮಾಸಿದ ಹೋಲಿಕೆ
ಸಾದಾ ಸೀದಾ ಫಳ ಫಳ, ಫಳ ಫಳಾ
ಹೇಗಿದೆ ಎಂದೆ , ಕವಿ ಮಿತ್ರ ಕನಲಿದ
‘ನಿನ್ನ ತಲೆ ಬೊಂಡ, ಸೋಜಿದ್ದೀಯಾ ಕೊರೋನಾ ಎರಡನೇ ದಂಡಯಾತ್ರೆ ಈಗ, ಬದುಕು ಉಳಿದರೆ ಸಾಕು ‘
ಸಿಗಿಸಿದ್ದನವ ಎರಡು ಮುಖ ಗವಸು
ಒಂದರ ಮೇಲೊಂದು
‘ಛಾತಿ ಇದ್ದರೆ ಬರೆ ನೋಡುವಾ
ಕಾಣದ ಮುಸುಕಿನೊಳಗಣ ನಗೆಯ ಚೆಲುವ
ಕಾವಳದಲ್ಲಿಯೂ ಚಿತ್ರ ಬಿಡಿಸುವ ಕಲೆ ಕಾವ್ಯ
ಆಗ ನೀ ಕವಿ, ಅದು ಕವನ, ‘ಎಂದ
‘ಖರೇ ಅಂದ್ರೆ , ನಿಜ್ವಾಗ್ಲೂ ನೀನೇ ಕವಿ’ ಎಂದೆ
ಕೆಮ್ಮಿದ, ಸಿಡಿದು ದೂರ ನಿಂತೆ
ಅವನ ಮುಖ ಮುಚ್ಚಿಗೆ ಒಂದೇ ಬಾರಿಗೆ
ಮೂಗು ಬಾಯಲ್ಲಿ ಗುಂಡಿ ತೋಡಿ ಬಂತು
ಫಕ್ಕನೆ ಕಣ್ಣಲ್ಲಿ ನೀರು, ಮಾತು ಗ ಗ ಗ
‘ಹೇಗೋ ಕಳಿತು ನಮ್ಮ ಕಾಲ ಮಿತ್ರಾ
ನಾಳೆ ಮಕ್ಕಳು ಮರಿಗಳ ಗತಿ ಹೇಗೋ ‘
ಮತ್ತೆ ಕಣ್ಣೀರು, ಮೂಗು ಸೊರ ಸೊರ
‘ಬಿಟ್ಟ ಉಸಿರೇ ಮರಳಿ ಒಳಗೆ
ಕಾದಿದೆ ಬಿಡು ಇನ್ನಾವುದೋ ಪೀಡೆ
ಸಾಕಾ ಬೇಕಾ ಎನುವಸ್ಟು ನೀಡುತ್ತಿತ್ತು
ಆಮ್ಲ ಜನಕವ ನಮ್ಮ ನಿಬಿಡ ಕಾನನ
ಈಗ ನೋಡು ಕೊಳ್ಳೆ, ಖರೀದಿ ಹೆಸರಲಿ
ಕಳ್ಳರು, ಖದೀಮರು, ಭ್ರಷ್ಟರು
ಗುಂಡು ಹಾರಿಸ್ಬೇಕು ಸಾಲಾಗಿ ನಿಲ್ಲಿಸಿ
ಗುಡುಗಿದ , ಕಣ್ಣಲಿ ಕಿಡಿ, ಮುಷ್ಟಿ ಬಿಗಿದ
ರಪ್ಪನೇ ಬಾರಿಸಿಬಿಟ್ಟಾನೆಂದು ಹಿಂದೆ ಸರಿದೆ
‘ಬದುಕಿದ್ದರೆ ಮತ್ತೆ ಸಿಗುವ ‘ಎಂದು
ಗಡ ಬಡ ಹೊರಟ . ನೋಡುತ್ತಲೇ ಇದ್ದೆ
ಅಷ್ಟು ದೂರ ಹೋದವ ತಿರುಗಿ ಕೈ ಬೀಸಿದ
ದುಗುಡ ಕಳೆದು ಹಗುರ ಮುಖ
ತುಟಿಯoಚಿನ ನಗು ಕಣ್ಣಂಚಲ್ಲಿ ತುಳುಕಿ
ಬೆರಳoಚಿಗೆ ಮಿನುಗಿ ಮರೆಯಾಯಿತು
ತನಗೂ ಗೊತ್ತಿಲ್ಲದೇ ಹೀಗೊಂದು ಕವನ ಸಾಲು ತೂರಿ ನಡೆದ.
ಏಕೋ ಏನೋ ಆ ಕ್ಷಣ ನಿರುಮ್ಮ ಳ ಎನಿಸಿತು
………ರಾಜೀವ ಅಜ್ಜೀಬಳ
Comments
Post a Comment