ಕರೋನಾ -ಒಂದು ಆಪ್ತ ಸಂವಾದ 


ಬ್ರಿಟನ್ದಲ್ಲಿ ಲಾಕ್ಡೌನ್ 

ಹಾಕಿಸಿ ಬೀಗುತ್ತ  ಬಂದ 

ಕರೋನಾ ಕಂಡದ್ದೇ ಹೆದರಿ 

'ಕ್ಯಾ ಕರನಾ  ಕರೋನಾ? '

ಎನ್ನುತ್ತಾ ನಿಂತೆ ಪೆಕ್ರನಂತೆ 

 ನಕ್ಕಿತು ಅದು ಪಕ ಪಕನೆ 

ಹುಬ್ಬು ಏರಿಸಿ,' ಎಲ್ಲೋ 

 ಸೋಸಿಯಲ್  ಅಂತರ? '

ಎಂದದ್ದೇ ಬಡ ಬಡ ದೂರ ನಿಂತೆ 


ಕಕ ಮಕ ನೋಡಿತು ಮುಖವ 

ಗೊತ್ತಾಯ್ತು ಕಿಸೆಗೆ ಕೈ ಹಾಕಿದೆ 

' ಮುಖ ಲಂಗೋಟಿ ' ಮತ್ತೆ ನಗು 

ಸೊಂಟ ಲಂಗೋಟಿ, ಕಂಠ ಲಂಗೋಟಿ 

ಗೊತ್ತಿತ್ತು ನನಗೆ.ಇದು ಹೊಸದು 

 ' ಹೇಗಿದೆ?  ಇದು ಇಂದಿನ ಫ್ಯಾಶನ್ ' 

ತನ್ನ ಉರುಟು ಮೈಯ ಕಡ್ಡಿಗಳ 

ಇನ್ನೂ ಉದ್ದ ನಿಗುರಿಸಿ  ಬೀಗಿತು


'ಸುಂದರ ಮುಖಾರವಿಂದ 

ಗಳಿಗೆ ಗ್ರಹಣ ಹಿಡಿಸಿದೆ

ಮಾದಕ ಚೆಲು ನಗುವ 

 ಅಪಹರಿಸಿದೆ   '

ಅಲವತ್ತುಕೊಂಡೆ 


'ಇನ್ನೆಷ್ಟು ಹೆಣ ಬೀಳಲಿದೆ 

ಈ ಬಾರಿ? 'ಎಂದೆ ವಿಷಯ ಬದಲಿಸಿ 

'  ಗೊತ್ತಿಲ್ಲ  ನನಗೆ ಹೆದರಿ

 ಸಾಯುವವವರ ಲೆಕ್ಕ  '

ಗಹಗಹಿಸಿತು  

 'ಲಸಿಕೆ  ಬಂದಿದೆ, ನಿನ್ನ ಪ್ರತಾಪ

ನಡೆಯದು ಬಹಳ ದಿನ ಎಂದೆ '

'ಹೋಗಲು ಬಂದವನಲ್ಲ 

ನಿಮ್ಮೊಡನೆ ಇರಲು ಬಂದವ '

ಕಣ್ಣ ಕೆಕ್ಕರಿಸಿತು 

ನಾನು ಓಡುವದರಲ್ಲಿದ್ದೆ 


'ಹೆದರು ಪುಕ್ಕ 

ಹೆದರಿದರೆ ಹೇಡಿ ದೆವ್ವ 

ನಾನು ಶತ್ರುವಲ್ಲ ಮಿತ್ರ'

ನನ್ನನ್ನು ರಮಿಸಿ ನಂಬಿಸಿತು. ನಿಂತೆ 


' ನೆನಪಿರಲಿ  ಕಾಪಾಡಿದೆ ನಿಮ್ಮ

ಕೊಳಕು ಕೈ, ಮೈ, ಉಸಿರಿOದ 

ಅರುಹಿದೆ ನೈರ್ಮಲ್ಯದ ಮಹತಿ 

ಮಿತಿಮೀರಿದ, ಮತಿಹೀನ 

ಆಡಂಬರ, ಅಹಂಕಾರ 

ದುಪ್ಪಳಿ    ದೌಲತ್ತು ತಡೆದೆ 

ನೆರವಾದೆ  ಬಡವರಿಗೆ 

ಸೇವಾ ದುರಂದರರು 

ಹೆಣದ ಮೇಲೆ ಹಣ ಎಣಿಸುವವರು 

ಗೋಸುಂಬೆ ಲೀಡರ್ಗಳು 

ಮೂರ್ಖ ಧರ್ಮಬೀರುಗಳು 

ಅಧಿಕಾರಸ್ಥರು ಅವರು ಇವರು 

ಯಾರು ಎಂಥವರು ಎನ್ನುವ 

ವಾಸ್ತವ ಬಿಡಿ ಬಿಡಿಸಿಟ್ಟೆ 

 ಸತ್ಯ ಅರ್ಥವಾಗದಿರೆ ನೀ ಕೆಟ್ಟೆ '


'ನಾನು ಜಾತ್ಯತೀತ, ಧರ್ಮಾತೀತ 

ಕಾಡಿದೆ ನೂರಾರು ದೇಶಗಳ 

ಕೋಟ್ಯಂತರ ಜನರ 

ಬಿಡಲಿಲ್ಲ ಧನವಂತರ

 ಹಣ ತಡೆಯಲಿಲ್ಲ ಹೆಣವಾಗುವದ '


'ಸಲೀಸಾಗಿ ಉಸಿರಾಡಿ ಬದುಕಿ 

ಎನುವ ಕಾಡುಗಳ ಕಾಡಿ ಕಾಡಿ 

ಅದಕೆ ಇದಕೆ, ಆ ದಾರಿ ಈ ದಾರಿ 

ಎಂದು ಹುಡು ಹುಡುಕಿ ಕಡಿದಿರಿ 

ಖಗ ಮೃಗ ಕೀಟಗಳ ಗೋಳುಹೊಯ್ದಿರಿ 

ಅವು ನೊಂದು ಬಡಿದ ಶಾಪದ ಫಲ '


'ಹದ್ದು ಮೀರಿದ ಮನುಜಾ 

ಮಾಡಿದ್ದುಣ್ಣೋ ಮಾರಾಯ 

ನಾನೀಗ ಭಸ್ಮಾಸುರ 

ರಕ್ತ ಬೀಜಾಸುರ 

ಕರೋನಾ ಅಸುರ 

ಬರುತ್ತಿದ್ದೇನೆ ಆಗಿ 

ಹೊಸ ರೂಪಾಂತರ '


ಎಂದದ್ದೇ ತಡ, ಈ ಬಾರಿ 

ಅಲ್ಲಿಂದ ಬಟರಾಬಿದ್ದು ಓಡಿದೆ 


.......ರಾಜೀವ  ಅಜ್ಜೀಬಳ

Comments

Popular posts from this blog

ವಿನಾಶ ಕಾಲೇ

Message to love in nature