ನಿತ್ಯ ಸುಂದರೀ ವಸುಂಧರಾ
ಅನುಪಮ ಸುಂದರ ಈ ಭೂಮಿ.
ಮರ ಕಟುಕರಿಂದ ಕಾಪಾಡಿದರೆ ಬೇಕಾದ್ದು ನಿನಗೀವೆ ಎನುತ್ತಿರುತ್ತದೆ.
ಮೊದಲು ಆಗಬೇಕಾದ್ದು ಜನಸಂಖ್ಯಾ ನಿಯಂತ್ರಣ.
ಪ್ರಕೃತಿಯ ಸಮೃದ್ಧಿಯನ್ನು ಸಾರುವ ಈ ಗೀತೆಯನ್ನು ನೃತ್ಯ ರೂಪಕ್ಕೆ ಅಳವಡಿಸಿ ವಿದ್ಯಾರ್ಥಿಗಳಿಂದ
ಪ್ರದರ್ಶಿಸಿದ್ದರು ಶ್ರೀಮತಿ ಗಂಗಾಬಾಯಿ ಮತ್ತು ಸಂಗಡಿಗರು.
ನಿತ್ಯ ಸುಂದರೀ ವಸುಂಧರಾ
ಎನಿತು ಬಗೆ ಚಿಗುರು ಹಸಿರು ಹೂ ಹಣ್ಣು
ಬಣ್ಣನೆಗೆ ಸಿಗದಂತ ಬಣ್ಣ ಬೆಡಗು
ಮುಗಿಲೆತ್ತರಕೆ ಭುವಿ ಬರೆದ ಚಿತ್ತಾರ
ಭವ್ಯ ಭೂರಮೆ ಸತ್ಯ ಶಿವ ಸಾಕಾರ
…………………….ನಿತ್ಯ ಸುಂದರೀ ವಸುಂಧರಾ
ಹಿಮಾಲಯ ವಿಂಧ್ಯಗಿರಿ ಸಹ್ಯಾದ್ರಿ ಶೃಂಗ
ಸಿಂಧು ಗಂಗೆ ಯಮುನೆ ಕಾವೇರಿ ಕೃಷ್ಟನೇ
ಕಾಳಿ ಅಘನಾಶಿನಿ ಕಣಿವೆ ಕೊಳ್ಳ ಹರಿದ್ವರ್ಣ
ಬೀಟೆ ಮತ್ತಿ ದೇವದಾರು ಸಿರಿ ಗಂಧ ಚಂದ
…………………ಸಸ್ಯ ಶ್ಯಾಮಲಾ ವಸುಂಧರಾ
ಐಶ್ವರ್ಯ ನೆಲದೊಡಲು ಅನರ್ಘ್ಯ ಸಿರಿಲಭ್ಯ
ಬಹುಸಾರ ಭೂರುಹ ಸಮಹಿತ ಸುಭಿಕ್ಷ
ಜಲ ಅನಿಲ ಜ್ಯೋತಿ ಶಕ್ತಿ ಸಂಪನ್ಮೂಲ
ತರು ಲತೆ ವಿಪಿನ ಸಂಜೀವಿನಿ ಸಮೂಲ
…………………….ರತ್ನಗರ್ಭಾ ವಸುಂಧರಾ
ಹಸಿರು ಹುಲ್ಲೆಲೆ ಹೂಗೆ ಬಂಗಾರ ಮುತ್ತು ಮಣಿ
ಪ್ರತಿ ನಯನ ತಾರೆ ನೋಡು ನೀ ಬೆಳಕ ಗಣಿ
ಅಂಧಕಾರಕೆ ಮಿನುಗು ಮಿಂಚುಹುಳು ಕಾರ್ತೀಕ
ಶಿಲೆ ಕಾಷ್ಟ ತೈಲ ಜಲ ಶಕ್ತಿ ದೀಪ
………………….ಜ್ಯೋತಿರ್ಮಯೀ ವಸುಂಧರಾ
ಎನಿತು ಬಗೆ ಖಗ ಮೃಗ ಬಣ್ಣ ಆಕಾರ ಸ್ವರ
ಪರವಶವೀಮನ ಆಲಿಸಿ ಪ್ರಕೃತಿಯಿಂಚರ
ಎಲರ ಸುಳಿದಾಟ ಸಳ ಸಳ ಸಲಿಲ ಸಲ್ಲಲಿತ
ಪುಟಗೊಂಡ ಗುಂಜನ ಕೊರಳ ಚೆಲುವುಲಿತ
……………………ನಾದಮಯೀ ವಸುಂಧರಾ
ಮತಿಹೀನ ಮನುಜ ನಡೆಸಿಹ ಸೃಷ್ಟಿ ಸಂಹಾರ
ಭಂಗಿಸಿ ಸಮತೋಲನ ಎಸಗುತಿಹ ಅಪಚಾರ
ಕೆರಳಿದರೆ ವಸುಧೆ ಮತ್ತದೇ ಶಿಶುಪಾಲವಧೆ
ಕುಸಿತ ಕಂಪನ ಆಸ್ಫೋಟ ಅಕಟಕಟಾ ಎಚ್ಚರ
……………..ಸರ್ವಶಕ್ತೇ ವಸುಂಧರಾ
…………….
ರಾಜೀವ ಅಜ್ಜೀಬಳ
Comments
Post a Comment